ನಾಗೇಂದ್ರ ಸ್ಥಪತಿ
1913-1972. ಕರ್ನಾಟಕದ ಹೆಸರಾಂತ ಶಿಲ್ಪಿ. ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸಿದ್ದಲಿಂಗಸ್ವಾಮಿ. ಇವರ ನಾಮಕರಣಕ್ಕೆ ಮುಂಚೆ ತೊಟ್ಟಿಲಿನಲ್ಲಿ ಸರ್ಪವೊಂದು ಕಾಣಿಸಿಕೊಂಡದ್ದರಿಂದ ಇವರಿಗೆ ನಾಗೇಂದ್ರ ಸ್ಥಪತಿ ಎಂಬ ಹೆಸರು ಇಡಲಾಯಿತೆಂಬ ಸ್ವಾರಸ್ಯವಾದ ಕಥೆ ಹೇಳುತ್ತಾರೆ. ಇವರ ತಂದೆಯೂ ಹೆಸರಾಂತ ಶಿಲ್ಪಿ. ಅವರು ತಮ್ಮ ಶಿಷ್ಯರೊಡನೆ ವಿಗ್ರಹಗಳನ್ನು ಕಡೆಯುವಾಗ ಅವನ್ನು ನೋಡುತ್ತ ಆ ಕಲೆಯಲ್ಲಿ ಆಸಕ್ತರಾಗಿ ತಮ್ಮ 21ನೆಯ ವಯಸ್ಸಿನಲ್ಲಿ ಚಾಮರಾಜೇಂದ್ರ ಕಲಾಶಾಲೆಯ ವಿದ್ಯಾರ್ಥಿಯಾಗಿ ಸೇರಿದರು. ಕೆ. ಕೇಶವಯ್ಯ ಇವರ ಕಲಾಗುರು. ಶಿಲ್ಪ, ಜ್ಯೋತಿಷ್ಯ, ಚಿತ್ರ ಮುಂತಾದವುಗಳ ಕಡೆ ಇವರ ಒಲವು ಹೆಚ್ಚಾಗಿ ಪಾಠಶಾಲೆಯ ಓದು ಅಷ್ಟಾಗಿ ಮುಂದುವರಿಯಲಿಲ್ಲ. ಸಂಗೀತದಲ್ಲೂ ಅಭಿರುಚಿ ಇತ್ತಾಗಿ ಮೃದಂಗ ವಾದನದಲ್ಲಿ ವಿಶೇಷ ಪರಿಶ್ರಮ ಸಾಧಿಸಿದರು; ಆಸ್ಥಾನ ವಿದ್ವಾನ್ ಚಿಕ್ಕ ರಾಮರಾಯರ ಹಾಗೂ ಸಂಗೀತಶಾಸ್ತ್ರರತ್ನರೆಂದು ಖ್ಯಾತರಾಗಿದ್ದ ವಾಸುದೇವಾಚಾರ್ಯರ ಕಚೇರಿಗಳಲ್ಲಿ ಮೃದಂಗ ನುಡಿಸಿ ಖ್ಯಾತಿ ಪಡೆದರು. ಹೀಗೆ ಕಲೆಯ ನಾನಾ ಪ್ರಕಾರಗಳಲ್ಲಿ ಪಳಗಿ ಕೊನೆಗೆ ಪರಂಪರೆಯಿಂದ ಬಂದ ಶಿಲ್ಪವೃತ್ತಿಯೊಂದನ್ನೇ ಕೈಗೂಡಿಸಿಕೊಂಡು ಒಳ್ಳೆಯ ಕೆಲಸ ಮಾಡಿದರು.

ಚಾಮರಾಜೇಂದ್ರ ಕಲಾಶಾಲೆಯಲ್ಲಿ ಪಾಶ್ಚಾತ್ಯ ಸಂಪ್ರದಾಯದಲ್ಲಿ ಚಿತ್ರಕಲಾಶಿಕ್ಷಣ ಪಡೆದು ಅನೇಕ ಶಾಸ್ತ್ರೀಯ ವರ್ಣಚಿತ್ರಗಳನ್ನು ಆ ಸಂಪ್ರದಾಯದಲ್ಲಿ ಇವರು ರಚಿಸಿದ್ದಾರೆ. ಇವರ ಅನೇಕ ದೇವದೇವತಾ ಚಿತ್ರಪಟಗಳನ್ನು ನಾನಾ ಕಡೆಗಳಲ್ಲಿ ಕಾಣಬಹುದು. ಮೈಸೂರಿನ ಅರಮನೆಯ ಸಭಾಮಂಟಪದ ಒಳ ಚಾವಣಿ ವಿನ್ಯಾಸದಲ್ಲಿ ಬರುವ ಶಾಸ್ತ್ರೀಯ ಚಿತ್ರಗಳಲ್ಲಿ ತಂದೆಯ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತ ಇವರ ಉತ್ತಮ ವರ್ಣಮೋಡಿಯನ್ನು ಮೆರೆದಿದ್ದಾರೆ. ಇವರು ಉತ್ತಮ ಶಿಲ್ಪಿಗಳು ಎಂಬುದಕ್ಕೆ ಇವರು ಕಡೆದ ನೈಜ ಶಿಲಾಮೂರ್ತಿಗಳೇ ನಿದರ್ಶನ. ಅವುಗಳಲ್ಲಿ ಉಲ್ಲೇಖಿಸಬಹುದಾದವು ಇವು: ಬಸವಕಲ್ಯಾಣದ ಗುಹೆಗೆ ರಚಿಸಿಕೊಟ್ಟ ಅಕ್ಕಮಹಾದೇವಿ, 5 ಅಡಿ ಎತ್ತರವಿರುವ ಮೈಸೂರು ಅರಮನೆಯ ಭುವನೇಶ್ವರಿ, ಮೈಸೂರಿನ ಕಾಮಕಾಮೇಶ್ವರಿ ದೇವಾಲಯದ ಶಿಲಾಮೂರ್ತಿಗಳು, ಬೆಂಗಳೂರಿನ ಸುಬ್ರಹ್ಮಣ್ಯಪುರದ ದೇವಾಲಯದ ವಲ್ಲಿದೇವಸೇನ ಸುಬ್ರಹ್ಮಣ್ಯಸ್ವಾಮಿ, ಚಿಕ್ಕಮಗಳೂರಿನ ಸತಿ ಸೋದರಸಮೇತನಾದ ಶ್ರೀರಾಮ ವಿಗ್ರಹ, ಗುಲ್ಬರ್ಗಕ್ಕೆ ಮಾಡಿಕೊಟ್ಟ 4 ಅಡಿ ಎತ್ತರದ ಮಹಾಕಾಳಿಕಾ, ದಾವಣಗೆರೆಯ ಪಾಶ್ರ್ವನಾಥ ದೇವಾಲಯಕ್ಕೆ ಮಾಡಿಕೊಟ್ಟ ಪಾಶ್ರ್ವನಾಥ.

ಮೈಸೂರಿನ ಕಾಮಕಾಮೇಶ್ವರಿ ದೇವಾಲಯದ ಮುಂದೆ ಬೃಹತ್ ನಂದಿ ವಿಗ್ರಹವೊಂದನ್ನು ಕಡೆಯಬೇಕೆಂಬ ತಂದೆಯ ಆಸೆಯನ್ನು ಇವರು ಈಡೇರಿಸಿದರು. (1954).				
				 (ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ